ಯಾರು ಬಿಟ್ಟರೂ ಕೈಯ ನೀ ಬಿಡದಿರು
ರಾಗ: ನಾದನಾಮಕ್ರಿಯೆ ,                 ತಾಳ: ಆದಿ.
ಯಾರು ಬಿಟ್ಟರೂ ಕೈಯ ನೀ ಬಿಡದಿರು ಕಂಡ್ಯ ನಾರಾಯಣ ಸ್ವಾಮಿ
ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ ನಾರಾಯಣ              ||ಪ||

ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ ನಾರಾಯಣ ಸ್ವಾಮಿ
ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ನಾರಾಯಣ
ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ ನಾರಾಯಣ ಬಹು
ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ ನಾರಾಯಣ              ||೧||

ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು ನಾರಾಯಣ ಸ್ವಾಮಿ
ಹಂಬಲಿಸಿದರಂಜಬೇಡವೆಂಬುವರಿಲ್ಲ ನಾರಾಯಣ
ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ ನಾರಾಯಣ ಸ್ವಾಮಿ
ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ ನಾರಾಯಣ              ||೨||

ಶಿಶು ಅವತಾರದಿ ಪಶುಗಳ ನೀ ಕಾಯ್ದೆ ನಾರಾಯಣ ಸ್ವಾಮಿ
ದಶ ಅವತಾರದಿ ಚಕ್ರವ ತಾಳಿದೆ ನಾರಾಯಣ
ವಿಷದ ಕಾಳಿಂಗನ ಮಡುವ ಕಲಕಿ ಬಂದೆ ನಾರಾಯಣ ಸ್ವಾಮಿ
ವಸುಧೆಯೊಳಧಿಕ ಪುರಂದರವಿಠಲನೆ ನಾರಾಯಣ                  ||೩||.ದಾಸವಾನಣಿ
ರಚನೆ ಪುರಂದರ ದಾಸರು  
ನೋಡಿ
 ಪುರಂದರದಾಸರ ಸಾಹಿತ್ಯ
 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ